ತೋಳು
ದೇಹದ ಒಂದು ಅವಯವ ಹೆಗಲಿನಿಂದ ಮೊಣಕೈ ವರೆಗಿನ ಭಾಗ (ಆರ್ಮ್). ರಟ್ಟೆ. ಮೇಲುಗೈ, ಬಾಹು ಪರ್ಯಾಯ ಪದಗಳು. ತೋಳಿನಲ್ಲಿ ಆಧಾರವಾಗಿ ಒಂದೇ ಒಂದು ಮೂಳೆ ಉಂಟು. ಇದಕ್ಕೆ ಹ್ಯೂಮರೆಸ್ ಎಂದು ಹೆಸರು. ಮೊಣಕೈಯಿಂದ ಕೆಳಕ್ಕೆ ಇರುವ ಭಾಗ ಕೆಳಕೈ (ಫೋರ್ ಆರ್ಮ್). ಇಲ್ಲಿ ಎರಡು ಉದ್ದ ಮೂಳೆಗಳಿವೆ : ರೇಡಿಯಸ್ ಮತ್ತು ಆಲ್ನ. ಕಿರುಬೆರಳಿನ ಕಡೆ ಇರುವುದು ಆಲ್ನ, ಹೆಬ್ಬರಳಿನ ಕಡೆ ಇರುವುದು ರೇಡಿಯಸ್. ತೋಳನ್ನು ಮುಂಡಕ್ಕೆ ಸೇರಿಸುವ ಭಾಗ ಹೆಗಲು (ಭುಜ). ಹೆಗಲ ಕೀಲಿನಲ್ಲಿ ಇತರ ಕೀಲುಗಳಲ್ಲಿಲ್ಲದಷ್ಟು ಚಲನೆಗೆ ಅವಕಾಶ ಉಂಟು.  ಕಾರಣ ಈ ಕೀಲುಗುಳಿಯಲ್ಲಿ ಚಂಡು ಕೂತಂತೆ ಏರ್ಪಟ್ಟಿದೆ (ಬಾಲ್ ಅಂಡ್ ಸಾಕೆಟ್ ಜಾಯಿಂಟ್). ಮೊಣಕೈ ಕೀಲಿನಲ್ಲಿ ಚಲನೆ ಒಂದು ಸಮ ಕ್ಷೇತ್ರದಲ್ಲಿ ಮಾತ್ರ ಸಾಧ್ಯ. ಕಾರಣ ಈ ಕೀಲಿರುವುದು ಬಾಗಿಲನ್ನು ಬಾಗಿಲುವಾಡಕ್ಕೆ ಸೇರಿಸುವ ತಿರುಗಣೆಯಂತೆ. ಹಸ್ತತಿರುಗಲು ರೇಡಿಯಸ್ ಹೊರಳಿ ಅದರ ಕೆಳ ಅರ್ಧ ಆಲ್ನದ ಮೇಲೆ ಕೂರುವಂತಾಗುವುದರಿಂದ ಸಾಧ್ಯ. ಇವೆರಡು ಮೂಳೆಗಳ ನಡುವೆ ಇರುವ ಕೀಲು ಈ ಚಲನೆಯನ್ನು ಏರ್ಪಡಿಸುತ್ತದೆ. ಇಂಥ ಚಲನೆಯಿಂದ ಅಂಗೈ ಮೇಲಾಗಿ ಇಲ್ಲವೆ ಮುಂಗೈ ಮೇಲಾಗಿ ಆಗಬಹುದು. ಮೊಣಕೈ ಮಡಚಿದರೆ ಮೇಲುರಟ್ಟೆಯಲ್ಲಿ ಮುಂದಕ್ಕೆ ಇರುವ ಟ್ರೈಸೆಪ್ಸ್ ಎಂಬ ಹೆಚ್ಚು ಬಲವುಳ್ಳ ಮಾಂಸಪೇಶಿ ಉಬ್ಬುತ್ತದೆ. ಮೊಣಕೈಯನ್ನು ನೀಡಿದರೆ ಮೇಲು ರಟ್ಟೆಯಲ್ಲಿ ಹಿಂದಕ್ಕೆ ಇರುವ ಟ್ರೈಸೆಪ್ಸ್ ಎಂಬ ಮಾಂಸಾಫೇಶಿ ಉಬ್ಬುತ್ತದೆ. ವಾಸ್ತವವಾಗಿ ಈ ಮಾಂಸಖಂಡಗಳ ಸಂಕೋಚನ ವ್ಯಾಕೋಚನಗಳಿಂದಲೇ ಮೇಲೆ ಹೇಳಿದ ಚಲನೆಗಳು ಸಾಧ್ಯ. ಮಣಿಕಟ್ಟು ಮತ್ತು ಬೆರಳುಗಳನ್ನು ಮಡಚುವ ಮಾಂಸಪೇಶಿಗಳು ಮುಂಗೈಯಲ್ಲಿ ಮುಂದಿವೆ; ಮತ್ತು ಅವನ್ನು ಚಾಚುವ ಕಡಿಮೆ ಗಾತ್ರದ ಮಾಂಸಪೇಶಿಗಳು ಹಿಂಗೈಯಲ್ಲಿವೆ.
ಬಾಹುವಿನ ಧಮನಿ (ಬ್ರೇಕಿಯಲ್ ಆರ್ಟರಿ) ಮೇಲುರಟ್ಟೆಯ ಒಳಪಾಶ್ರ್ವದಲ್ಲಿ ಮುಂದುವರಿದು ಮೊಣಕೈ ಹತ್ತಿರ ಕೈಯ ಮುಂದೆಯೇ ಇದೆ. ಇದರ ಸ್ಪಂದನವನ್ನು ಬೆರಳುಗಳಿಂದ ತಿಳಿಯಬಹುದು. ಮೊಣಕೈ ಮುಂದಿನ ಗುಳಿಯಲ್ಲಿ ಇದು ಎರಡಾಗಿ ಶಾಖೆ ಒಡೆಯುತ್ತದೆ. ಕೆಳಗೈ ಒಳಪಾಶ್ರ್ವದಲ್ಲಿ ಗಮಿಸುವ ಧಮನಿ ಅಲ್ನಾರ್ ಧಮನಿ.  ಇದು ಸ್ವಲ್ಪ ದೊಡ್ಡದು. ಹೆಬ್ಬಟ್ಟಿನ ಕಡೆಗಿರುವ ಧಮನಿ ರೇಡಿಯಲ್ ಧಮನಿ. ಮಣಿ ಕಟ್ಟಿನ ಹತ್ತಿರ ವೈದ್ಯ ಹಿಡಿದು ನೋಡುವ ನಾಡಿ ಇದೇ. ಸ್ಥೂಲಕಾಯರಲ್ಲಿ ಧಮನಿಗಳು (ತೆಳು ಭಿತ್ತಿಯ ಮಲಿನ ರಕ್ತನಾಳಗಳು) ಸುಲಭವಾಗಿ ಕಾಣಿಸುವುದಿಲ್ಲ. ಸಣಕಲಾದವರಲ್ಲಿ ಇವು ಚರ್ಮದ ಕೆಳಗೆ ಎದ್ದು ಕಾಣುವುವು. ಆದರೆ ಧಮನಿಗಳ ಸಂಗಡವೇ ಇರುವ ಸಿರೆಗಳು ಕಾಣಿಸುವುದಿಲ್ಲ. ಬೈಸೆಪ್ಸಿನ ಪಕ್ಕದಲ್ಲಿ ಕೆಫಾಲಿಕ್ ಸಿರೆ ಎಂಬುದಿದೆ. ಕಿರುಬೆರಳಿನ ಕಡೆ ಮೇಲುತೋಳಿನಲ್ಲಿ ಬೇಸಿಲಿಡ್ ವೆಯಿನ್ ಎಂಬ ಸಿರೆಗಳು ಕಾಣಿಸುತ್ತವೆ. 			(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ